Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Not seeking money, power or position for children: Murthy to Infy board

ಮಕ್ಕಳಿಗೆ ಹಣ, ಅಧಿಕಾರ ಅಥವಾ ಸ್ಥಾನಮಾನ ಕೇಳುತ್ತಿಲ್ಲ: ಇನ್ಫಿ ಮಂಡಳಿ ಆರೋಪಕ್ಕೆ ಮೂರ್ತಿ ಪ್ರತಿಕ್ರಿಯೆ

ಚೀನಾ-ಭಾರತ ಯೋಧರು

ಆಗಸ್ಟ್ 15ರಂದು ಲಡಾಕ್‌ನಲ್ಲಿ ಭಾರತ-ಚೀನಾ ಯೋಧರ ನಡುವೆ ಜಟಾಪಟಿ ನಡೆದಿತ್ತು: ಭಾರತ

ನೂತನ ನೋಟಿನ ಮಾದರಿ

ಹೊಸ 50 ರುಪಾಯಿ ಮುಖಬೆಲೆ ನೋಟಿನ ಮಾದರಿ ಬಿಡುಗಡೆ ಮಾಡಿದ ಆರ್‌ಬಿಐ

Rahul Gandhi

ರಾಹುಲ್ ಗಾಂಧಿಗೆ ಭಾರೀ ಹಿನ್ನಡೆ: ಪಕ್ಷದ ಚುನಾವಣಾ ವ್ಯವಸ್ಥಾಪಕ ಆಶಿಶ್ ಕುಲಕರ್ಣಿ ರಾಜಿನಾಮೆ

Indian Army to Get six Apache Attack Helicopters in Deal Worth Rs 4,168 Crore With US

ಭಾರತೀಯ ಸೇನೆಯ ಬತ್ತಳಿಕೆ ಸೇರಲಿವೆ ಅಮೆರಿಕದ ವಿಧ್ವಂಸಕ 6 ಆಪಾಚೆ ಹೆಲಿಕಾಪ್ಟರ್!

CM Ibrahim gets Congress ticket for Legislative Council bypolls

ವಿಧಾನ ಪರಿಷತ್ ಉಪ ಚುನಾವಣೆ: ಕಾಂಗ್ರೆಸ್ ನಿಂದ ಸಿಎಂ ಇಬ್ರಾಹಿಂಗೆ ಟಿಕೆಟ್

Bantwal Violence Case: Karnataka High Court Stalls All Legal Proceeding on Leaders of Hindu Outfits

ಬಂಟ್ವಾಳ ಕಲ್ಲುತೂರಾಟ ಪ್ರಕರಣ; ಹಿಂದೂ ಮುಖಂಡರ ವಿರುದ್ಧದ ಎಫ್ ಐಆರ್ ಗೆ ಹೈಕೋರ್ಟ್ ತಡೆ

ಸಂಗ್ರಹ ಚಿತ್ರ

ದೆಹಲಿಯಲ್ಲಿ ಮಹಿಳಾ ಸಿಬ್ಬಂದಿ ಸೀರೆ ಎಳೆದು ಲೈಂಗಿಕ ಕಿರುಕುಳ: ಕೀಚಕನ ಬಂಧನ

Virat Kohli

ಐಸಿಸಿ ಏಕದಿನ ರ್ಯಾಂಕಿಂಗ್: ನಂಬರ್ 1 ಸ್ಥಾನ ಕಾಯ್ದುಕೊಂಡ ವಿರಾಟ್ ಕೊಹ್ಲಿ

Mugulunage Movie Still

ಯೋಗಿ-ಗಣಿ ಜೋಡಿಯ 'ಮುಗುಳುನಗೆ' ಚಿತ್ರ ಸೆಪ್ಟೆಂಬರ್ 1ಕ್ಕೆ ಬಿಗ್ ರಿಲೀಸ್

Toxic froth from Bengaluru

ಕಡಿಮೆಯಾದ ಬೆಳ್ಳಂದೂರು ಕೆರೆ ನೊರೆ, ಮಳೆಯಿಂದ ಚೇತರಿಸಿಕೊಳ್ಳುತ್ತಿರುವ ಬೆಂಗಳೂರು

Playback singer LN Shastri

ಖ್ಯಾತ ಹಿನ್ನೆಲೆ ಗಾಯಕ ಎಲ್ಎನ್ ಶಾಸ್ತ್ರಿಗೆ ಕರುಳಿನ ಕ್ಯಾನ್ಸರ್

Enagi Balappa

ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ ಇನ್ನಿಲ್ಲ

ಮುಖಪುಟ >> ಭವಿಷ್ಯ-ಆಧ್ಯಾತ್ಮ

'ಆನಂದ' ಕರುಣಿಸಿದ 'ಶಿವ' ತಾಂಡವ, ಬ್ರಹ್ಮವೊಂದೇ ಸತ್ಯ ಎನ್ನುವ ಭಾವ!

ನಟರಾಜನ ನಾಟ್ಯವನ್ನು ವಿಶ್ಲೇಷಿಸಿದ ಆನಂದ ಕುಮಾರ ಸ್ವಾಮಿಯವರ "ಡಾನ್ಸ್ ಆಫ್ ಶಿವ" ಪುಸ್ತಕ
Shiva

'ಶಿವ' ತಾಂಡವ (ಸಾಂಕೇತಿಕ ಚಿತ್ರ)

ಭಾರತೀಯ ಕಲೆಯನ್ನು ಪೌರ್ವಾತ್ಯ, ಪಾಶ್ಚಿಮಾತ್ಯರಿಬ್ಬರೂ ತುಚ್ಛವಾಗಿ ನೋಡುತ್ತಿದ್ದ ಸಂದರ್ಭದಲ್ಲಿ ಅವುಗಳ ಮಹತ್ವವನ್ನು ಪಾಶ್ಚಿಮಾತ್ಯರದ್ದೇ ಪರಿಭಾಷೆಯಲ್ಲಿ ಕಟ್ಟಿಕೊಟ್ಟ ಮಹಾನುಭಾವ ಪಶ್ಚಿಮ ಮೂಲದ-ಪೂರ್ವದ ಮೇಲಿನ ಆದರ ಭಾವದ ಆನಂದ ಕುಮಾರ ಸ್ವಾಮಿ. ಭಾರತೀಯ ಸಂಸ್ಕೃತಿಯ ಅತ್ಯುತ್ತಮ ಪ್ರತಿನಿಧಿಯಾಗಿದ್ದ ಋಷಿ ಸದೃಶ ಕಲಾ ತಪಸ್ವಿ ಆತ ಎಂದು ಕುಮಾರಸ್ವಾಮಿಯವರನ್ನು ವಿಶ್ವದ ಅತಿರಥ ಮಹಾರಥ ವಿದ್ವಾಂಸರೇ ಕೊಂಡಾಡಿದ್ದು ಅವರು ಏರಿದ್ದ ಎತ್ತರಕ್ಕೆ ಸಾಕ್ಷಿ. ಒಬ್ಬ ವ್ಯಕ್ತಿ ತನ್ನ ಜೀವಮಾನವಿಡೀ ಓದಿ ಮುಗಿಸಲಾಗದಷ್ಟು ಬರೆದ ಮಹಾನ್ ವ್ಯಕ್ತಿ ಆನಂದ ಕುಮಾರ ಸ್ವಾಮಿ.

 "ಶಂ ಕರೋತಿ ಇತಿ ಶಂಕರಃ"
 ಶಂ ಎಂದರೆ ಶುಭ ಅಥವಾ ಕಲ್ಯಾಣ. ಯಾರು ಕಲ್ಯಾಣಕಾರಕನೋ ಅವನೇ ಶಂಕರ. ಶಿವ ಅಂದರೆ ಸ್ವಯಂ ಪ್ರಕಾಶ ಎಂದರ್ಥ. ಪರಿಪೂರ್ಣ ಪಾವಿತ್ರ್ಯ, ಪರಿಪೂರ್ಣ ಜ್ಞಾನ, ಪರಿಪೂರ್ಣ ಸಾಧನೆಗಳು ಯಾರಲ್ಲಿರುತ್ತವೆಯೋ ಅವನೇ "ಮಹಾದೇವ"! ಅವನು ಕಾಲಪುರುಷ. ಭಾಲಚಂದ್ರನಿಗೆ ಪಿಂಗಲಾಕ್ಷ ಎನ್ನುವ ಹೆಸರೂ ಇದೆ. ಪಿಂಗಲಾ ಎಂದರೆ ಗೂಬೆಯ ಒಂದು ಜಾತಿ. ಈ ಪಕ್ಷಿಗೆ ಭೂತ, ವರ್ತಮಾನ, ಭವಿಷ್ಯದ ಬಗ್ಗೆ ತಿಳಿಯುತ್ತದೆ. ಚಿಂತೆಯಿಲ್ಲದಿರುವ ಅವನು ಅಘೋರ. ಸಹಜ ಭಾವದಲ್ಲಿ ಅಹಂ ರಹಿತ ಅವಸ್ಥೆಯಲ್ಲಿರುವ ಜೀವಕ್ಕೆ ಭೋಲಾ ಎಂದು ಹೆಸರು. ಯೋಗ ಶಾಸ್ತ್ರಕ್ಕನುಸಾರ ಮೂರನೇ ಕಣ್ಣೆಂದರೆ ಸುಷುಮ್ನಾ ನಾಡಿ. ಶಿವನು ಜಿತೇಂದ್ರಿಯ. ಸಮುದ್ರಮಥನದಿಂದ ಉದ್ಭವವಾದ ಹಾಲಾಹಾಲವನ್ನು ಕುಡಿದ ಈ ಮಹಾವೈರಾಗಿ. ವಿಷ ಉದರ ಸೇರದಿರಲೆಂದು ಶಿವನ ಕುತ್ತಿಗೆಯನ್ನು ಒತ್ತಿ ಹಿಡಿದಳು ಪಾರ್ವತಿ. ಶಿವ ನೀಲಕಂಠನೆನಿಸಿಕೊಂಡ. ನೆನೆದಾಕ್ಷಣ ಸುಪ್ರೀತನಾಗಿ ಅನುಗ್ರಹಿಸುವ ಕಾರಣ ಶಿವನು ಅಶುತೋಷ! ದಕ್ಷಿಣಾ ಎಂಬ ಶಬ್ಧ ಬುದ್ಧಿವಾಚಕ, ದಕ್ಷಿಣಾಮೂರ್ತಿಯು ಅದ್ವೈತದ ಸಾರ. ವೀಣಾಧರ, ಯೋಗ, ಜ್ಞಾನ ಹಾಗೂ ವ್ಯಾಖ್ಯಾನ ಇವು ದಕ್ಷಿಣಾ ಮೂರ್ತಿಯ ನಾಲ್ಕು ರೂಪಗಳು.

ನಟರಾಜನ ನಾಟ್ಯವನ್ನು ವಿಶ್ಲೇಷಿಸಿದ ಅದ್ಭುತ ಪುಸ್ತಕ ಆನಂದ ಕುಮಾರ ಸ್ವಾಮಿಯವರ "ಡಾನ್ಸ್ ಆಫ್ ಶಿವ". ಶಿವನು ನಾಟ್ಯದ ಗುರು. ಆದಿ ಗುರು. ನಟ ಸಾರ್ವ ಭೌಮ ಅವನು. ವಿಶ್ವವೆಂಬ ಪರದೆಯ ಮೇಲೆ ಅವನು ನೀಡುವ ಪ್ರದರ್ಶನಗಳಲ್ಲಿ ಅದೆಷ್ಟು ವಿಧಗಳು. ಆ ಪ್ರದರ್ಶನಗಳಲ್ಲಿ  ನಟನೂ ಅವನೇ ನೋಟಕನೂ! ಅವನು ತನ್ನ ಡಮರುಗವನ್ನು ಬಾರಿಸಲು ಆರಂಭಿಸಿದನೆಂದರೆ ವಿಶ್ವ ವ್ಯಾಪಾರವೆಲ್ಲಾ ಆರಂಭವಾಗಲೇಬೇಕು. ಅವನ ಈ ನೃತ್ಯ ಮುಗಿದ ಮೇಲೆ ಉಳಿಯುವವ ಅವನೊಬ್ಬನೇ. ಹೀಗೆ ನಾಟ್ಯದ ಮೂಲವೇ ಶಿವ ಎಂದು ಅವರು ಕಟ್ಟಿ ಕೊಡುವಾಗ ಪ್ರಜ್ಞೆ ಯಾ ಅಪ್ರಜ್ಞಾಪೂರ್ವಕವಾಗಿ ವಿಶ್ವದ ಉಗಮದ ರಹಸ್ಯವನ್ನೇ ಅವರು ಪ್ರತಿಪಾದಿಸಿದಂತಾಯಿತು. ತನ್ನ ತಾಂಡವದ ವೀಕ್ಷಕನೂ, ಕೊನೆಗೆ ಉಳಿಯುವವನೂ ಅವನೊಬ್ಬನೇ ಎನ್ನುವಾಗಲೇ ಬ್ರಹ್ಮವೊಂದೇ ಸತ್ಯ ಎನ್ನುವ ಭಾವ ಸ್ಫುರಿಸಿತು. “ಶಕ್ತಿಯೆಲ್ಲವೂ ಬ್ರಹ್ಮದಲ್ಲಿದೆ. ಆ ಶಕ್ತಿಯಿಂದ ಜಗತ್ತಿನ ಎಲ್ಲಾ ಕಾರ್ಯಚಟುವಟಿಕೆಗಳು ನಡೆಯುತ್ತವೆ. ಬ್ರಹ್ಮವೇ ಪರಮೇಶ್ವರ. ಶಕ್ತಿಯೇ ಅಂಬಾಳ್. ಈ ಶಕ್ತಿಯಿಂದಲೇ ವಿಷ್ಣು ವಿಶ್ವವನ್ನು ಕಾಪಾಡುತ್ತಾನೆ. ಬ್ರಹ್ಮ, ಅದರ ಶಕ್ತಿ, ಅದು ಮಾಡುವ ಕಾರ್ಯ ಒಂದಕ್ಕೊಂದು ಬೇರೆಯಲ್ಲ. ಎರಡು ಸಭೆಗಳು. ಒಂದರಲ್ಲಿ ಎಲ್ಲವನ್ನೂ ಅಡಗಿಸುವವನು ತಾಂಡವಕ್ಕೆ ತೊಡಗಿದ್ದಾನೆ(ಚಿದಂಬರಂ). ಅವನಿಂದಲೇ ವಿಶ್ವ ವ್ಯಾಪಾರ ನಡೆಯುತ್ತಿದೆ. ಇನ್ನೊಂದರಲ್ಲಿ ಎಲ್ಲರನ್ನೂ ಕುಣಿಸಬೇಕಾದವ ನಿದ್ರಿಸುತ್ತಿದ್ದಾನೆ(ಶ್ರೀರಂಗಂ). ಯೋಗನಿದ್ರೆ! ಎರಡೂ ಸಭೆಗಳಲ್ಲಿರುವವನು ಒಬ್ಬನೇ! ಅದೇ ಬ್ರಹ್ಮ. ಅವನು ದಕ್ಷಿಣಾಮೂರ್ತಿ. ಅವನು ಜ್ಞಾನದ ಅಧಿದೇವತೆ.

"ಶಿವನ ಎಷ್ಟು ಬಗೆಯ ನೃತ್ಯವನ್ನು ಅವನ ಭಕ್ತರು ತಿಳಿದಿದ್ದಾರೆ ಎನ್ನುವುದನ್ನು ನಾನು ಹೇಳಲಾರೆ. ಆದರೆ ಈ ಎಲ್ಲಾ ನಾಟ್ಯದ ಹಿಂದೆ ಇರುವುದು ಮೂಲಶಕ್ತಿ ಎನ್ನುವುದು ಸುಸ್ಪಷ್ಟ." ಎನ್ನುತ್ತಾರೆ ಆನಂದ ಕುಮಾರಸ್ವಾಮಿ. ನಾಟ್ಯವೇ ಮೊದಲ ಸೃಷ್ಟಿಶೀಲ ಚಟುವಟಿಕೆಯೇ? ನಾಟ್ಯಕ್ಕೂ ಕಾಮಕ್ಕೂ(Eros) ಬಿಡಿಸಲಾಗದ ನಂಟಿದೆಯೇ? ಪ್ರಕೃತಿಯ ನಡೆಯಲ್ಲಿರುವ "ಲಯ"ದ ಸಂವೇದನೆ ನಾಗರೀಕತೆಯ ಪೂರ್ವದ ನಮ್ಮ ಪೂರ್ವಜರ ನಾಟ್ಯದಲ್ಲಿ ಅಡಗಿತ್ತೇ? ಮುಂತಾದ ತಮ್ಮ ಚಿಂತನೆಯನ್ನು ಆನಂದ ಕುಮಾರಸ್ವಾಮಿ ಹೇಳುತ್ತಾ ಹೋಗುತ್ತಾರೆಯೇ ಹೊರತು ಅದನ್ನು ವಿಸ್ತರಿಸುವ ಕಾರ್ಯಕ್ಕೆ ಮುಂದಾಗುವುದಿಲ್ಲ. ಇಲ್ಲಿ ಕಾಮ ಎನ್ನುವುದು ಇಚ್ಛೆ ಅಥವಾ ಸಂಕಲ್ಪ. ಅದು ಶಿವನಿಚ್ಛೆ...ಆದುದರಿಂದಲೇ ನರ್ತನ. ಅದೇ ವಿಶ್ವ ಪರದೆಯ ಮೇಲೆ ಮೂಡಿ ಬರುವ ಚಿತ್ರಣ. ಕಲಾತತ್ತ್ವದ ಜೊತೆಗೆ ತತ್ತ್ವಜ್ಞಾನವೂ ಮೇಳೈಸಿದ್ದು ಕುಮಾರ ಸ್ವಾಮಿಯವರ ವೈಶಿಷ್ಟ್ಯ.

ಶಿವನ ಹಲವು ನೃತ್ಯಗಳಲ್ಲಿ ಮೂರು ನೃತ್ಯಗಳ ಬಗೆಗಷ್ಟೇ ಆನಂದ ಕುಮಾರಸ್ವಾಮಿ ಹೇಳತೊಡಗುತ್ತಾರೆ. ಒಂದು "ಶಿವ ಪ್ರದೋಶ ಸ್ತೋತ್ರ"ದಲ್ಲಿ ವರ್ಣಿಸಲ್ಪಟ್ಟಿರುವ ಕೈಲಾಸ ಶಿಖರದ ಮೇಲಿನ ಸಾಯಂಕಾಲದ ನೃತ್ಯ. ಶೂಲಪಾಣಿಯಾಗಿ ಅವನು ನೃತ್ಯಗೈಯಲು ಸರಸ್ವತಿ ವೀಣೆಯನ್ನು, ಇಂದ್ರ ಕೊಳಲನ್ನು, ವಿಷ್ಣು ಡಮರುವನ್ನು ನುಡಿಸುತ್ತಿದ್ದರೆ ಲಕ್ಷಿ ಹಾಡುತ್ತಾಳೆ. ದೇವತೆಗಳು, ಯಕ್ಷ, ಕಿನ್ನರ, ಕಿಂಪುರುಷ, ಸಿದ್ಧ, ಸಾಧ್ಯ, ನಾಗ, ಅಪ್ಸರೆಯರೆಲ್ಲಾ ಶಿವನ ಸುತ್ತ ನಿಂತು ಆ ನಾಟ್ಯಕ್ಕೆ ಸಾಕ್ಷಿಯಾಗುತ್ತಾರೆ. ಎರಡನೆಯದ್ದು ತಾಂಡವ. ಶಿವನ ತಾಮಸಿಕ ರೂಪವಾದ ಭೈರವ ಅಥವಾ ವೀರಭದ್ರನಿಗೆ ಸಂಬಂಧಿಸಿದ್ದು. ರುದ್ರಭೂಮಿಗಳಲ್ಲಿ ದಶ ಕರಗಳೊಂದಿಗೆ ದೇವಿಯನ್ನೂ ಜೊತೆ ಸೇರಿಸಿಕೊಂಡು ಶಿವ ನರ್ತಿಸುತ್ತಾನೆ. ಎಲ್ಲೋರಾ, ಎಲಿಫೆಂಟಾ, ಭುವನೇಶ್ವರಗಳಲ್ಲಿ ಈ ನಾಟ್ಯದ ಭಂಗಿಗಳನ್ನು ಕಾಣಬಹುದು. ಮೂರನೆಯದ್ದು ನಟರಾಜನ ನಾದಾಂತ ನೃತ್ಯ. ತಾರಗ್ರಮ್ ಕಾನನದಲ್ಲಿ ಕರ್ಮನಿಷ್ಠ-ತರ್ಕನಿಷ್ಠ ಮೀಮಾಂಸಕರಿದ್ದರು. ಅವರನ್ನು ಭೇಟಿಯಾಗಲೆಂದು ಶಿವ ಸ್ತ್ರೀ ರೂಪ ಧರಿಸಿದ ವಿಷ್ಣು ಹಾಗೂ ಆದಿಶೇಷನ ಜೊತೆ ಹೊರಟ. ಇವರನ್ನು ನೋಡಿ ಋಷಿ ಮಂಡಲದಲ್ಲಿ ತೀವ್ರ ಜಿಜ್ಞಾಸೆ ಉಂಟಾಯಿತು. ಆ ಜಿಜ್ಞಾಸೆ ಕೋಪಕ್ಕೆ ತಿರುಗಿತು. ಋಷಿಗಳು ಹೆಬ್ಬುಲಿಯೊಂದನ್ನು ಸೃಷ್ಟಿಸಿ ಶಿವನ ವಿರುದ್ಧ ಪ್ರಯೋಗಿಸಿದರು. ಶಿವ ನಗುತ್ತಾ ಕಿರು ಬೆರಳ ಉಗುರ ಮೊನೆಯಿಂದ ಹುಲಿಯ ಚರ್ಮವನ್ನು ಸುಲಿದು ತನ್ನ ಸೊಂಟದ ಸುತ್ತಾ ಸುತ್ತಿಕೊಂಡ. ಅವರು ಭಯಾನಕ ಸರ್ಪವೊಂದನ್ನು ಸೃಷ್ಟಿಸಿದರೆ, ಶಿವ ಆ ಹಾವನ್ನೇ ಹೂವಿನ ಮಾಲೆಯಂತೆ ಕೊರಳಿಗೆ ಹಾಕಿಕೊಂಡ. ಅಲ್ಲದೇ ನರ್ತನಕ್ಕೆ ತೊಡಗಿದ. ಕೊನೆಯ ಪ್ರಯತ್ನವೆಂಬಂತೆ ಆ ಮುನಿಗಳು ವಿಕಾರ ರೂಪದ ಮಯಲಕ ಎನ್ನುವ ಕುಬ್ಜನೊಬ್ಬನನ್ನು ಸೃಷ್ಟಿಸಿ ಕಳುಹಿದರು. ಕಾಲಿಗೆ ತೊಡಕಾಗಿ ಬಂದ ಆ ಕುಬ್ಜನ ಮೇಲೆಯೇ ಶಿವ ತನ್ನ ಹೆಬ್ಬೆರಳನ್ನೂರಿದ. ಕುಬ್ಜನ ಬೆನ್ನೆಲುಬು ಮುರಿಯಿತು. ಅವನ ಆ ಸ್ಥಿತಿಯೇ ಶಿವನಿಗೆ ಪ್ರಣಾಮವಾಗಿಬಿಟ್ಟಿತು. ಹೀಗೆ ಈ ಪುರಾಣದ ಅನುಭವದ ಮೇಲೆಯೇ ಕಲೆ ಅರಳಿತು. ಮೈಯನ್ನು ತಿನ್ನಲು ಬರುವ ಹುಲಿಯೇ ಮೈಮುಚ್ಚುವ ಬಟ್ಟೆಯಾದದ್ದು, ಹಾವೇ ಹೂ ಮಾಲೆಯಂತೆ ಕೊರಳ ಬಳಸುವುದು...ಇದು ಕಲೆಯ ವಿಶೇಷ. ಆಗ ಆದಿಶೇಷ ಶಿವನನ್ನು ಅರ್ಚಿಸಿ ಪುನಃ ನಾಟ್ಯವನ್ನು ನೋಡುವ ಸೌಭಾಗ್ಯವನ್ನು ಕರುಣಿಸು ಎಂದು ಶಿವನನ್ನು ಪ್ರಾರ್ಥಿಸಿದಾಗ ಅವನು ವಿಶ್ವದ ಕೇಂದ್ರವಾದ ಚಿದಂಬರಂನಲ್ಲಿ ಮತ್ತೆ ನಾಟ್ಯ ಮಾಡುತ್ತೇನೆಂದು ಮಾತು ಕೊಡುತ್ತಾನೆ. ಇದು ಆನಂದ ಕುಮಾರಸ್ವಾಮಿಯವರು ತಮಿಳಿನ ಕೊಯಿಲ್ ಪುರಾಣದ ಘಟನೆಯನ್ನು ಕಟ್ಟಿಕೊಡುವ ರೀತಿ. ಅಚ್ಚರಿಯೆಂದರೆ ಶ್ರೀಹರಿಯ ಮಿಡಿತಕ್ಕೆ ಅಚ್ಚರಿಗೊಂಡು ಅದರ ಹಿಂದಿನ ಕಾರಣ ಶಿವ ತಾಂಡವವೆಂದು ತಿಳಿದ ಆದಿಶೇಷ ಶಿವನ ತಾಂಡವವನ್ನು ವೀಕ್ಷಿಸಲೋಸುಗ ತಪಗೈಯ್ಯುತ್ತಿರುವಾಗ ನಂದಿಯೊಡನೆ ವಾಗ್ವಾದವಾಗಿ ಕೊಂಬು ಕೋಡುಗಳಿಲ್ಲದ ಅಕ್ಷರ ರಚಿಸುವೆನೆಂದು ಪ್ರತಿಜ್ಞೆ ಮಾಡಿ, ಯೋಗಿಭೂಷಣನ ಕೃಪೆಯಿಂದ ವೀಕ್ಷಿಸಿದ ತಾಂಡವವು ಯೋಗವಿದ್ಯೆಯಾಗಿ "ದರ್ಶನ"ವಾಗಿ ಪತಂಜಲಿಯಿಂದ ಹೊರಹೊಮ್ಮಿತಷ್ಟೇ. ಎರಡು ಬಾರಿಯೂ ತಾಂಡವದ ವೀಕ್ಷಣೆಯ ಆಸೆಯಿಂದ ಹೋದವ ಶೇಷನೇ. ನಾಗನಿಗೂ ನಾಟ್ಯಕ್ಕೂ ಏನು ಲಯಬಂಧ!

ವಾಸ್ತವವಾಗಿ ಆನಂದ ಕುಮಾರಸ್ವಾಮಿಯವರು ಹೇಳಿದ್ದು ಅನಂದ ತಾಂಡವದ ಒಂದು ಭಂಗಿಯ ಬಗೆಗೆ ಮಾತ್ರ. ತಾಂಡವದಲ್ಲೇ ಆನಂದ, ಸಂಧ್ಯಾ, ಕಾಳಿಕಾ, ತ್ರಿಪುರ, ಗೌರೀ, ಸಂಹಾರ, ಉಮಾ ತಾಂಡವಗಳೆಂಬ ಏಳು ಪ್ರಕಾರಗಳಿವೆ. ತಾಂಡವದ ಪ್ರತಿಯೊಂದು ಮುದ್ರೆಗೂ ವ್ಯಾಪಕ ಅರ್ಥವಿರುತ್ತದೆ. ಸಾಮಾನ್ಯವಾಗಿ ಕಾಣಸಿಗುವ ಶಿವನ ಆನಂದ ತಾಂಡವದ ಒಂದು ಮುದ್ರೆಯನ್ನು ನೋಡೋಣ. ಅಲ್ಲಿ ಕಿವಿಗಳಲ್ಲಿನ ವಿಭಿನ್ನ ಕುಂಡಲಗಳು ಅರ್ಧನಾರೀಶ್ವರನನ್ನು, ಹಿಂದಿನ ಬಲಗೈಯಲ್ಲಿನ ಡಮರುಗ ನಾದ ಹಾಗೂ ಶಬ್ಧ ಬ್ರಹ್ಮದ ಉತ್ಪತ್ತಿಯನ್ನು, ಹಿಂದಿನ ಎಡಗೈಯಲ್ಲಿನ ಅಗ್ನಿ ಚರಾಚರದ ಶುದ್ಧಿಯನ್ನು, ಮುಂದಿನ ಬಲಗೈ ಅಭಯವನ್ನು, ಮುಂದಿನ ಎಡಗೈ ಜೀವಗಳ ಮುಕ್ತಿಗಾಗಿ ಮೇಲೆ ಎತ್ತಿರುವ ಕಾಲಿನ ಕಡೆಗೆ ಸಂಕೇತವನ್ನು, ಬಲಗಾಲ ಕೆಳಗೆ ಬಿದ್ದಿರುವ ಅಪಸ್ಮಾರ ಅಥವಾ ಮಯಲಕ ಹೆಸರಿನ ದೈತ್ಯ ಅವಿದ್ಯೆ ಮತ್ತು ಅಜ್ಞಾನದ ನಾಶವನ್ನು, ಸುತ್ತಲಿನ ಚಕ್ರ ಮಾಯಾಚಕ್ರವನ್ನು, ಚಕ್ರಕ್ಕೆ ತಗಲಿಸಿರುವ ಕೈಕಾಲು ಮಾಯೆಯನ್ನು ಪವಿತ್ರಗೊಳಿಸುವುದನ್ನು, ಚಕ್ರದಿಂದ ಹೊರಡುವ ಜ್ವಾಲೆಗಳಿಂದ ಹೊರಹೊಮ್ಮುವ ಐದು ಸ್ಪುಲ್ಲಿಂಗಗಳು ಸೂಕ್ಷ್ಮ ಪಂಚತತ್ವಗಳನ್ನು ಪ್ರತಿಪಾಡಿಸುತ್ತವೆ. ಆನಂದ ತಾಂಡವದ ಒಂದು ಭಂಗಿಯೇ ಇಷ್ಟಾದರೆ ಸಂಪೂರ್ಣ ತಾಂಡವದ ಅದರಲ್ಲೂ ಅದರ ಎಲ್ಲಾ ಏಳು ಪ್ರಕಾರಗಳ ಗೂಢತೆ ಎಷ್ಟಿರಬಹುದು? 

ಶಿವ ನಮ್ಮನ್ನು ಆವರಿಸಿರುವ ಮಾಯೆಯ ಪೊರೆಯನ್ನು ದೂರ ಮಾಡುತ್ತಾನೆ. ಕರ್ಮ ಬಂಧನವನ್ನು ಕಳಚುತ್ತಾನೆ. ಅವಿದ್ಯೆಯನ್ನು ದೂರ ಮಾಡಿ ಶಾಶ್ವತ ಆನಂದವನ್ನು, ಜ್ಞಾನವನ್ನು ಕರುಣಿಸುತ್ತಾನೆ. ಈ ಶಾಶ್ವತ ನಾಟ್ಯವನ್ನು ಯಾರು ತಮ್ಮೊಳಗೇ ಕಂಡುಕೊಳ್ಳುತ್ತಾರೋ ಅವರು ಮತ್ತೆ ಮತ್ತೆ ಹುಟ್ಟುವುದರಿಂದ ತಪ್ಪಿಸಿಕೊಳ್ಳುತ್ತಾರೆ. ಶಿವನ ಲೀಲೆಯನ್ನು ವರ್ಣಿಸುವ "ಉನೈವಿಳಕ್ಕಮ್"ಗೆ ಸಂವಾದಿಯಾಗಿ ಕುಮಾರ ಸ್ವಾಮಿಯವರು Skryabin ಕವಿಯ "Poem of Ecstasy" ಯ ಕೆಲವು ಸಾಲುಗಳನ್ನು ಉದ್ಧರಿಸುತ್ತಾರೆ. ಹಾಗೆ ಉದ್ಧರಿಸುವಾಗ ಪುರುಷ, ಯೋಗ-ಮಾಯಾ, ಆನಂದ, ಪ್ರಕೃತಿ. ಸ್ವಭಾವ, ಲೀಲೆ, "ನೇತಿ-ನೇತಿ" ಇತ್ಯಾದಿ ಭಾವಗಳನ್ನು ಆರೋಪಿಸುತ್ತಾರೆ. "ಪುರುಷ ನರ್ತಿಸುತ್ತಿದ್ದಾನೆ, ಯೋಗಮಾಯೆ ಪುರುಷನ ಜೊತೆಗೂಡಿ ಎಲ್ಲವನ್ನೂ ಸೃಷ್ಟಿಸುತ್ತಿದ್ದಾಳೆ..." ಹೀಗೆ ಸಾಗುತ್ತದೆ ಕವನ. ಕೊನೆಗೆ "ನಾನು ಎಲ್ಲವನ್ನೂ ನಿರಾಕರಿಸುತ್ತೇನೆ. ಹಾಗೆ ನಿರಾಕರಿಸುತ್ತಾ ಸಂಪೂರ್ಣ ಸ್ವಾತಂತ್ರ್ಯ ಹಾಗೂ ಆನಂದವನ್ನು ಪಡೆಯುತ್ತೇನೆ. ಯಾವುದು ಕೆಡುಕೆಂದು ಕಂಡಿದ್ದೆನೋ ಅದೀಗ ಜೀವನೋತ್ಸಾಹವಾಗಿಬಿಟ್ಟಿದೆ." ಶಿವನ ನಾಟ್ಯ ನಿರಂತರ, ಸ್ವಭಾವಗತ, ಅನುದ್ದೇಶಿತ, ಮೋಕ್ಷದಾಯಕ ಎನ್ನುವಾಗಲೇ ಭಾರತೀಯ ಕಲೆಗೆ ಅಧ್ಯಾತ್ಮವೇ ಮೂಲ ಎನ್ನುವುದನ್ನು ಎತ್ತಿ ಹಿಡಿಯುತ್ತಾರೆ ಆನಂದ ಕುಮಾರಸ್ವಾಮಿ. ಅಲ್ಲದೆ ಕಲೆಗೆ ನೇರ ಸಂಬಂಧವಿರುವ ಅಧ್ಯಾತ್ಮದಿಂದ ಅವರು ಪ್ರಭಾವಿತರಾಗುತ್ತಾರೆ. 

ಪಂಚಾಕ್ಷರಿಯನ್ನು, ಅದರ ಮಹತ್ವವನ್ನು, ಯಾವುದರಿಂದ ಶಿವತಾಂಡವವು ಬೇರ್ಪಡುವುದಿಲ್ಲವೋ ಅಂತಹ ಓಂಕಾರವನ್ನು ಸ್ವಾಮಿ ಪಿಳ್ಳೈಯವರ ವಿವರಣೆಯೊಂದಿಗೆ ದಾಖಲಿಸುತ್ತಾರೆ ಕುಮಾರಸ್ವಾಮಿ. "ಮೊದಲ ನಾಟ್ಯ ಶಕ್ತಿಯದ್ದು - ಅದು ಓಂಕಾರ, ಕಾಳಿಯ ನೃತ್ಯ. ಎರಡನೆಯದ್ದು ಶಿವನದ್ದು, ಓಂಕಾರದಿಂದ ಬೇರ್ಪಡಿಸಲಾಗದ್ದು(ಅರ್ಧಮಾತ್ರಾ ಹಾಗೂ ತುರೀಯಮ್). ಶಿವನಿಚ್ಛೆಯಿಲ್ಲದೆ ಮೊದಲ ನಾಟ್ಯವು ನಡೆಯದು. ಪ್ರಕೃತಿ-ಪುರುಷರ(ಶಿ-ವ & ನ-ಮ) ಈ ನಾಟ್ಯದ ನಡುವೆ ಇರುವವು ಜೀವಾತ್ಮಗಳು(ಯ). ಶಿವ ತಾಂಡವವೆಂದರೆ ಅದು ವಿಶ್ವದ ಸ್ಥಿತಿಯ ಮೂಲ. ಜೀವಿಗಳ ಭವಬಂಧನವನ್ನು ಬಿಡಿಸುವುದೇ ಅದರ ಉದ್ದೇಶ. ಚಿದಂಬರಂ(ಆಧ್ಯಾತ್ಮಿಕ ಹೃದಯ)ವೇ ಅದರ ಕೇಂದ್ರ.

ಮೊಟ್ಟ ಮೊದಲು ಶಿವನ ನಾಟ್ಯದ ಬಗೆಗೆ ಋಷಿಮುನಿಗಳಿಗೆ ಆದ "ದರ್ಶನ", ಅವರ ಚಿಂತನ-ಮಂಥನ, ಅವರು ಆಗ ಅನುಭವಿಸಿದ ಮಹದಾನಂದ, ಜೀವನದ ಸತ್ಯವನ್ನು ಅವರು ಕಂಡುಕೊಂಡ ರೀತಿ, ಶತಶತಮಾನಗಳು ಕಳೆದರೂ ಆ ಸತ್ಯ ಜಗತ್ತೇ ಒಪ್ಪುವಂತೆ ಸ್ಥಿರವಾಗಿರುವ ಬಗ್ಗೆ ಕುಮಾರಸ್ವಾಮಿಯವರು ರೋಮಾಂಚನಗೊಳ್ಳುತ್ತಾರೆ. ಭೌತ ಶಾಸ್ತ್ರಜ್ಞ ಫ್ರಿಟ್ಜೊಪ್ ಕಾಪ್ರಾನಂತಹವರಿಗೆ ದ್ರವ್ಯರಾಶಿಯ ಸೂಕ್ಷ್ಮಾಣುಕಣಗಳ ನರ್ತನವಾಗಿ ಹೊಸದೃಷ್ಟಿ ನೀಡಿದರೆ ಕಾರ್ಲಸಗನ್ ಶಿವನ ರೂಪದಲ್ಲಿ ಆಧುನಿಕ ಖ-ಭೌತೀಯ ಕಲ್ಪನೆಗಳ ಪೂರ್ವಸೂಚನೆಯನ್ನು ಕಂಡ. ಆನಂದ ಕುಮಾರಸ್ವಾಮಿಯವರಿಗೆ ಭಾರತೀಯ ಕಲೆಯ ಮೂಲವಾಗಿ ಅದು "ದರ್ಶನ" ಕೊಟ್ಟಿತು.
-ರಾಜೇಶ್ ರಾವ್
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

English summary
The Nataraja statue symbolizes Shiva’s cosmic dance of creation and destruction and by choosing the particular image of Shiva, India had in a way acknowledged the profound significance of the metaphor of Shiva’s dance. “Ananda K. Coomaraswamy, seeing beyond the unsurpassed rhythm, beauty, power and grace of the Nataraja, once wrote of it “It is the clearest image of the activity of God which any art or religion can boast of.”

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement