Kannadaprabha The New Indian Express
2015ರಲ್ಲಿ ಪಿಎಂ2.5 ಮಾಲಿನ್ಯಕಾರಕದಿಂದ ಭಾರತದಲ್ಲಿ ಐದು ಲಕ್ಷ ಜನರ ಸಾವು! 
By select 
31 Oct 2017 02:00:00 AM IST

ನವದೆಹಲಿ: 2015ರಲ್ಲಿ ಕೇವಲ ಮಾಲೀನ್ಯದಿಂದಾಗಿಯೇ ಭಾರತದಲ್ಲಿ ಸುಮಾರು 5 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಖ್ಯಾತ ಆಂಗ್ಲ ವೈದ್ಯಕೀಯ ನಿಯತಕಾಲಿಕೆ ಲ್ಯಾನ್ಸೆಟ್ ಹೇಳಿದೆ.

ಈ ಬಗ್ಗೆ ತನ್ನ ವರದಿ ಬಿಡುಗಡೆ ಮಾಡಿರುವ ಲ್ಯಾನ್ಸೆಟ್, 2015ರಲ್ಲಿ ವಾಯು ಮಾಲಿನ್ಯಕಾರಕ ಪಿಎಂ 2.5ನಿಂದಾಗಿ ಭಾರತದಲ್ಲಿ ಐದು ಲಕ್ಷ ಜನರು ಸಾವಿಗೀಡಾಗಿದ್ದಾರೆ. ಪ್ರಮುಖವಾಗಿ ಕಟ್ಟಿಗೆಗಳನ್ನು ಸುಟ್ಟಾಗ ಅದರಿಂದ  ಹೊರಸೂಸುವ ವಿಷಕಾರಿ ಗಾಳಿ (ಪಿಎಂ2.5)ಯಿಂದಾಗಿ  2015ರಲ್ಲಿ ದೇಶದಲ್ಲಿ 1,24,207 ಮಂದಿ ಅವಧಿಪೂರ್ವ ಮರಣವನ್ನಪ್ಪಿದ್ದಾರೆಂದು ವರದಿ ಹೇಳಿದೆ. 

ಮಾನವ ಕೂದಲಿನ ಅಗಲಕ್ಕಿಂತಲೂ 30 ಪಟ್ಟು ಸಣ್ಣದಾಗಿರುವ ಈ ಪಿಎಂ 2.5 ಎಂಬ ಮಾಲಿನ್ಯಕಾರಕ ಮಾನವ ದೇಹಕ್ಕೆ ತುಬಾ ಅಪಾಯಕಾರಿಯಾಗಿದ್ದು, ಪಿಎಂ10 ಗಂಟಲಲ್ಲಿ ಸಿಲುಕಿಕೊಂಡರೆ, ಪಿಎಂ2.5  ಗಂಟಲನ್ನು ದಾಟಿ  ಶ್ವಾಸಕೋಶ ಹಾಗೂ ರಕ್ತನಾಳಗಳನ್ನು ಪ್ರವೇಶಿಸುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಪ್ರಮುಖವಾಗಿ ಪಿಎಂ2.5 ಮಾಲಿನ್ಯಕಾರಕವನ್ನು ಹೊರಸೂಸುವ ಕಾರ್ಖಾನೆಗಳು, ಕಲ್ಲಿದ್ದಲು ಆಧಾರಿತ ವಿದ್ಯುತ್ ಘಟಕಗಳು ಮತ್ತು ಸಾರಿಗೆ ವಾಹನಗಳು ಕೂಡ 2015ರಲ್ಲಿ ಅತಿ ಹೆಚ್ಚು ಭಾರತೀಯರ ಸಾವಿಗೆ ಕಾರಣವಾಗಿದೆ ಎಂದೂ  ವರದಿಯಲ್ಲಿ ತಿಳಿಸಲಾಗಿದೆ. ಲ್ಯಾನ್ಸೆಟ್ ವರದಿಯಂತೆ 1980ರಿಂದೀಚೆಗೆ ಭಾರತ ತನ್ನ ವಿದ್ಯುತ್ ಉತ್ಪಾದನೆಯನ್ನು ತ್ರಿಗುಣಗೊಳಿಸಿದ್ದು, ಈ ಅವಧಿಯಲ್ಲಿ  ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಉಪಯೋಗಿಸುವ ಪ್ರಮಾಣ ಶೇ.  22ರಿಂದ ಶೇ. 44ಕ್ಕೆ ಏರಿದೆ. ಅಂತೆಯೇ 2015ರ ಸಮಯದಲ್ಲೂ ಭಾರತದ ಹಲವು ಮನೆಗಳಲ್ಲಿ ಇಂದಿಗೂ ಸೌದೆ ಒಲೆಯನ್ನೇ ಬಳಕೆ ಮಾಡುತ್ತಿದ್ದು, ಅದರಿಂದ ಹೊರ ಸೂಸುವ ಪಿಎಂ 2.5 ಅವರ ಆರೋಗ್ಯದ ಮೇಲೆ ಗಂಭೀರ  ಪರಿಣಾಮ ಬೀರುತ್ತಿದೆ ಎಂದು ಹೇಳಲಾಗಿದೆ.

ಸೌರ ವಿದ್ಯುತ್ ಉತ್ಪಾದನೆ ಸಾಮರ್ಥ್ಯವೂ ದೇಶದಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು, ವಿಶ್ವದ ಸೌರ ವಿದ್ಯುತ್ ಉತ್ಪಾದನೆ ಏರಿಕೆಯಲ್ಲಿ ಭಾರತ ಕೂಡ ಗಣನೀಯ ಪಾತ್ರ ನಿರ್ವಹಿಸುತ್ತಿದೆ ಎಂದೂ ಲ್ಯಾನ್ಸೆಟ್ ವರದಿ ತಿಳಿಸಿದೆ.

ಇನ್ನು ಕೇಂದ್ರ ಸರ್ಕಾರ ಒಂದೂವರೆ ವರ್ಷದಿಂದೀಚೆಗೆ ಉಜ್ವಲ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಮೂಲಕ ಸೌದೆ ಒಲೆಗೆ ಪರ್ಯಾಯವಾಗಿ ಗ್ಯಾಸ್ ಒಲೆಗಳನ್ನು ಸೃರ್ಕಾರ ನೀಡುತ್ತಿದೆ. ಇದೇ ವೇಳೆ ಮಾಲೀನ್ಯ ರಹಿತ  ಇಂಧನ ಮೂಲದ ಸಂಶೋಧನೆಯಲ್ಲೂ ಸಂಶೋಧಕರು ತೊಡಗಿದ್ದಾರೆ ಎನ್ನಲಾಗಿದೆ. 

Copyright � 2012 Kannadaprabha.com