Kannadaprabha The New Indian Express
ವೈಯುಕ್ತಿಕ ಕಾರಣ ಅಲ್ಲ, ಅರೋತೆ ಪದ ತ್ಯಾಗಕ್ಕೆ ಆಟಗಾರ್ತಿಯರೊಂದಿಗಿನ ಭಿನ್ನಾಭಿಪ್ರಾಯವೇ ಕಾರಣ? 
By select 
10 Jul 2018 12:00:00 AM IST

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡ ಪ್ರಧಾನ ಕೋಚ್ ತುಷಾರ್ ಅರೋತೆ ರಾಜಿನಾಮೆ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವಂತೆಯೇ, ಆರೋತೆ ರಾಜಿನಾಮೆಗೆ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರ ಭಿನ್ನಾಭಿಪ್ರಾ.ವೇ ಕಾರಣ ಎನ್ನಲಾಗಿದೆ.

ಇಂದು ಕೋಟ್ ತುಷಾರ್ ಅರೋತೆ ಅವರು ವೈಯುಕ್ತಿಕ ಕಾರಣ ನೀಡಿ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಬಿಸಿಸಿಐ ಕೂಡ ಅರೋತೆ ಅವರ ರಾಜಿನಾಮೆಯನ್ನು ಅಂಗೀಕರಿಸಿತ್ತು. ಇದೇ ನವೆಂಬರ್ ನಲ್ಲಿ ಗಯಾನದಲ್ಲಿ ಐಸಿಸಿ ಮಹಿಳಾ ವಿಶ್ವ ಟಿ20 ಟೂರ್ನಿ ಆರಂಭವಾಗಲಿದ್ದು, ನವೆಂಬರ್ 9ರಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಮಹಿಳಾ ತಂಡ ತಮ್ಮ ಅಭಿಯಾನವನ್ನು ಆರಂಭಿಸಲಿದ್ದಾರೆ. ಇಂತಹ ಸ್ಥಿತಿಯಲ್ಲಿ ಅರೋತೆ ಅವರ ರಾಜಿನಾಮೆ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಅರೋತೆ ರಾಜಿನಾಮೆ ಆಟಗಾರ್ತಿಯರೊಂದಿಗಿನ ಭಿನ್ನಾಭಿಪ್ರಾಯವೇ ಕಾರಣ?
ಇನ್ನು ಪ್ರಧಾನ ಕೋಚ್ ತುಷಾರ್ ಅರೋತೆ ಅವರ ರಾಜಿನಾಮೆಗೆ ತಂಡದ ಆಟಗಾರ್ತಿಯರೊಂದಿಗಿನ ಭಿನ್ನಾಭಿಪ್ರಾಯವೇ ಕಾರಣ ಎನ್ನಲಾಗುತ್ತಿದೆ. ಇದಕ್ಕೆ ಇಂಬು ನೀಡುವಂತೆ ಸ್ವತಃ ಅರೋತೆ ಅವರು ಆಟಗಾರ್ತಿಯರು ನನ್ನ ವಿರುದ್ಧವಾಗಿದ್ದಾರೆ ಎಂದು ಹೇಳುವ ಮೂಲಕ ತಂಡದಲ್ಲಿನ ಆಂತರಿಕ ಸಂಘರ್ಷವನ್ನು ಬಹಿರಂಗಗೊಳಿಸಿದ್ದಾರೆ. 

ರಾಜಿನಾಮೆ ನೀಡುವಂತೆ ಅರೋತೆಗೆ ಒತ್ತಡ
ಬಿಸಿಸಿಐನ ಮತ್ತೊಂದು ಮೂಲಗಳ ಪ್ರಕಾರ ಮಹಿಳಾ ಕ್ರಿಕೆಟ್ ತಂಡದ ಕೋಚ್ ತುಷಾರ್ ಅರೋತೆ ಅವರು ರಾಜಿನಾಮೆ ನೀಡುವಂತೆ ಒತ್ತಡ ಹೇರಲಾಗಿತ್ತು ಎನ್ನಲಾಗಿದೆ. ತಂಡದಲ್ಲಿನ ಕೆಲ ಹಿರಿಯ ಆಟಗಾರ್ತಿಯರು ಅರೋತೆ ವಿರುದ್ಧ ತೀವ್ರ ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ. ಅಲ್ಲದೆ ತಂಡದ ಅಧಿಕಾರಿಗಳ ಮೇಲೆ ಅರೋತೆ ರಾಜಿನಾಮೆಗೆ ಒತ್ತಾಯಿಸಿದ್ದರು ಎನ್ನಲಾಗಿದೆ. ಅರೋತೆ ಅವರನ್ನು ಕೋಚ್ ಸ್ಥಾನದಿಂದ ಕಿತ್ತೊಗೆಯುವ ಬದಲು ಅವರಿಂದಲೇ ರಾಜಿನಾಮೆ ಪಡೆಯಬೇಕು ಎಂದು ನಿರ್ಧರಿಸಲಾಗಿತ್ತಂತೆ ಎಂದು ಹೇಳಲಾಗುತ್ತಿದೆ. 

ಇನ್ನು ರಾಜಿನಾಮೆ ಅಂಗೀಕಾರಕ್ಕೂ ಮುನ್ನ ತುಷಾರ್ ಅರೋತೆ ಅವರು ಬಿಸಿಸಿಐನ ಆಡಳಿತಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಆಟಗಾರ್ತಿಯರ ಕೆಲ ಸಂದೇಶಗಳನ್ನು ಕೂಡ ಇಲ್ಲಿ ತಿಳಿಸಲಾಗಿತ್ತಂತೆ. ಪ್ರಮುಖವಾಗಿ ತುಷಾರ್ ಅರೋತೆ ಅವರ ಕೋಚಿಂಗ್ ಮಾದರಿ ಆಟಗಾರ್ತಿಯರಿಗೆ ಇಷ್ಟವಾಗಿಲ್ಲ ಎನ್ನಲಾಗಿದೆ. ಆಟಗಾರ್ತಿಯರು ಮಾತ್ರವಲ್ಲ ತಂಡದ ಮ್ಯಾನೇಜರ್, ಆಯ್ಕೆ ಸಮಿತಿ ಕೂಡ ಅರೋತೆ ಕುರಿತಂತೆ ಅಸಮಾಧಾನ ಹೊಂದಿತ್ತು ಎನ್ನಲಾಗಿದೆ.

ಒಟ್ಟಾರೆ ಬರೋಡಾದ ಮಾಜಿ ಕ್ರಿಕೆಟಿಗ ತುಷಾರ್ ಅರೋತೆ ತಮ್ಮ ಪ್ರಧಾನ ಕೋಚ್ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಇದರಿಂದ ಸಾಬೀತಾಗಿದೆ.

Copyright � 2012 Kannadaprabha.com