Kannadaprabha The New Indian Express
ತ್ರೇತಾಯುಗದ ರಾಮನ ಕಥೆ ಹೇಳಲಿದೆ ರೈಲ್ವೇ ಇಲಾಖೆಯ 'ಶ್ರೀ ರಾಮಾಯಣ ಎಕ್ಸ್ ಪ್ರೆಸ್' 
By select 
11 Jul 2018 12:00:00 AM IST

ನವದೆಹಲಿ: ಭಾರತೀಯ ರೈಲ್ವೇ ಇಲಾಖೆ ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದು, ತ್ರೇತಾಯುಗದ ರಾಮನ ಕಥೆ ಹೇಳುವ 'ಶ್ರೀ ರಾಮಾಯಣ ಎಕ್ಸ್ ಪ್ರೆಸ್'ಗೆ ಚಾಲನೆ ನೀಡಲಿದೆ.

ಇದೇ ನವೆಂಬರ್ ನಲ್ಲಿ ಭಾರತೀಯ ರೈಲ್ವೇ ಇಲಾಖೆಯು ‘ರಾಮಾಯಣ ಎಕ್ಸ್’ಪ್ರೆಸ್ ರೈಲು’ ಪ್ರಾರಂಭಿಸಲು ಯೋಜನೆ ರೂಪಿಸಿದ್ದು, ತ್ರೇತಾಯುಗದ ರಾಮಾಯಣ ಕಾಲದ ಅನುಭವವನ್ನು ಈ ರೈಲು ನೀಡಲಿದೆ. ಈ ಪ್ರವಾಸಿ ರೈಲು ಪ್ರಯಾಣದ ಮೂಲಕ ನೀವು ಅಯೋಧ್ಯೆಯಿಂದ ರಾಮೇಶ್ವರಂ ಮೂಲಕ ಶ್ರೀಲಂಕಾದ ಕೊಲೊಂಬೋವರೆಗೆ ಪ್ರಯಾಣ ನಡೆಸಲಿದ್ದು, ತನ್ನ ಪ್ರಯಾಣಿಕರಿಗೆ ರಾಮಾಯಣದ ಅನುಭವ ನೀಡಲಿದೆ.

ಈ ವಿಶೇಷ ರೈಲು ಒಟ್ಟು 800 ಆಸನಗಳನ್ನು ಹೊಂದಿದ್ದು, ಇದೇ ನವೆಂಬರ್ 14 ರಂದು ದೆಹಲಿಯಿಂದ  ಈ ವಿಶೇಷ ರೈಲು ತನ್ನ ಮೊದಲ ಪ್ರಯಾಣ ಆರಂಭಿಸಲಿದೆ. ದೆಹಲಿಯ ಸಫ್ದರ್ ಜಂಗ್ ಸ್ಟೇಷನ್ ನಿಂದ ಹೊರಡುವ ರೈಲಿಗೆ ಅಯೋಧ್ಯೆಯಲ್ಲಿ ಪ್ರಥಮ ನಿಲುಗಡೆಯಿದ್ದು, ಅಲ್ಲಿಂದ ರಾಮ್ ಕೋಟ್, ಕನಕ್ ಭವನ್ ಮತ್ತು ಹನುಮಾನ್ ಗಡಿಗೆ ಸಂಚರಿಸಲಿದೆ. 

ರಾಮೇಶ್ವರ ನಂತರ ಶ್ರೀಲಂಕಾಕ್ಕೆ ತೆರಳ ಬಯಸುವ ಪ್ರಯಾಣಿಕರು ಚೆನ್ನೈ ಮೂಲಕ ಶ್ರೀಲಂಕಾ ತಲುಪಿ ಅಲ್ಲಿಂದ ಪ್ರಯಾಣ ಮುಂದುವರಿಸಬಹುದು. ನಂತರದಲ್ಲಿ ವಾರಣಾಸಿ, ಪ್ರಯಾಗ, ನಂದೀಗ್ರಾಮ್, ಸೀತಾಮಡಿ, ಜನಕಪುರ, ಶೃಂಗವೇರ್ ಪುರಚಿತ್ರಕೂಟ, ನಾಸಿಕ್, ಹಂಪಿ ಮತ್ತು ರಾಮೇಶ್ವರ್ ನಲ್ಲಿ ಈ ರೈಲು ನಿಲುಗಡೆಯಾಗಲಿದ್ದು ಇಲ್ಲಿನ ಸ್ಥಳಗಳನ್ನು ಸಂದರ್ಶಿಸುವ ಅವಕಾಶ ಪ್ರವಾಸಿಗರಿಗೆ ಕಲ್ಪಿಸಲಾಗುತ್ತದೆ.

ಇನ್ನು ಊಟ ಉಪಹಾರದ ವ್ಯವಸ್ಥೆ ರೈಲಿನಲ್ಲೇ ಕಲ್ಪಿಸಲಾಗಿದ್ದು, ಪ್ರವಾಸಿಗರಿಗೆ ಭೇಟಿ ನೀಡುವ ಸ್ಥಳಗಳಲ್ಲಿ ರಾತ್ರಿ ತಂಗುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇನ್ನು ರಾಮೇಶ್ವರದಿಂದ ಶ್ರೀಲಂಕಾಗೆ ಪ್ರಯಾಣ ಬೆಳೆಸಲು ಆಸಕ್ತಿ ಇರುವವರನ್ನು ಚೆನ್ನೈಗೆ ಕರೆದುಕೊಂಡು ಹೋಗಿ ಅಲ್ಲಿಂದ ವಿಮಾನದ ಮೂಲಕ ಶ್ರೀಲಂಕಾಗೆ ಕರೆದೊಯ್ಯಲಾಗುವುದು. 16 ದಿನಗಳ ಈ ಪ್ರವಾಸದಲ್ಲಿ ಪ್ರತೀ ಪ್ರವಾಸಿಗನಿಗೆ (ಶ್ರೀಲಂಕಾ ಪ್ರವಾಸ ಹೊರತುಪಡಿಸಿ) ರೂ 15,120 ರೂ ಶುಲ್ಕ ನಿಗದಿಪಡಿಸಲಾಗಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈಲ್ವೇ ಇಲಾಖೆ ಈ ಯೋಜನೆಯಿಂದ ಉತ್ತಮ ಆದಾಯವನ್ನು ನಿರೀಕ್ಷಿಸುತ್ತಿದ್ದು, ಪ್ರಥಮ ಯಾತ್ರೆಗೆ ಜನರ ಪ್ರತಿಕ್ರೀಯೆಯ ಆಧಾರದ ಮೇಲೆ ವರ್ಷದಲ್ಲಿ ಎಷ್ಟು ಬಾರಿ ಈ ರೈಲನ್ನು ಓಡಿಸಬಹುದು ಎಂದು ತೀರ್ಮಾನಿಸಲಾಗುವುದು ಎಂದು ಐಆರ್ ಸಿಟಿಸಿ ನಿರ್ದೇಶಕಿ ರಜನಿ ಹಸೀಜ ತಿಳಿಸಿದ್ದಾರೆ.

ಇನ್ನು ಶ್ರೀಲಂಕಾ ಪ್ಯಾಕೇಜ್ ನಲ್ಲಿ ಕಂಡ್ಯಾ, ನುವಾರ ಎಲಿಯಾ, ಕೊಲಂಬೋ, ನೆಗೊಂಬೋ ಪ್ರದೇಶಗಳನ್ನು ವೀಕ್ಷಿಸಬಹುದಾಗಿದೆ. ಆದರೆ ಇದಕ್ಕೆ ಪ್ರತ್ಯೇಕ ಶುಲ್ಕ ಭರಿಸಬೇಕಾಗುತ್ತದೆ. ಈ ವಿಶೇಷ ಪ್ಯಾಕೇಜ್ ಟಿಕೆಟ್ ಬುಕ್ಕಿಂಗ್ ಐಆರ್ ಸಿಟಿಸಿ ವೆಬ್ ಸೈಟಿನಲ್ಲಿ ಶೀಘ್ರ ಲಭ್ಯವಾಗಲಿದೆ. 

Copyright � 2012 Kannadaprabha.com