ಬೆಂಗಳೂರು: ಚುನಾವಣೆ ವೇಳೆ ನೀಡಿದ ಭರವಸೆಯಂತೆಯೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
ಸದನದಲ್ಲಿ ರೈತರ ಸಾಲ ಮನ್ನಾ ಕುರಿತಂತೆ ನಡೆದ ಚರ್ಚೆ ವೇಳೆ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ಕಿಡಿಕಾರಿತು. ರೂ.34,000 ಕೋಟಿ ಸಾಲ ಮನ್ನಾದಿಂದ 17.32 ಲಕ್ಷ ರೈತರಿಗೆ ಸಹಾಯವಾಗಲಿದೆ ಎಂದು ಕುಮಾರಸ್ವಾಮಿಯವರು ಹೇಳಿದರು. ಇದಕ್ಕೆ ತೀವ್ರವಾಗಿ ಕಿಡಿಕಾರಿದ ಬಿಜೆಪಿ, ಇದರಿಂದ ಯಾವೊಬ್ಬ ರೈತನಿಗೂ ಲಾಭವಾಗುವುದಿಲ್ಲ. 2014-2017 ಸಾಲಿನ ರೈತರ ಒಟ್ಟು ಸಾಲ ರೂ.2.86 ಲಕ್ಷ ಕೋಟಿ ಎಂದು ಜಗದೀಶ್ ಶೆಟ್ಟರ್ ಅವರು ಹೇಳಿದರು.
ಇದಕ್ಕೆ ಕೈಜೋಡಿಸಿದ ಗೋವಿಂದ ಕಾರಜೋಳ ಅವರು, 2014-2017 ವರ್ಷದಲ್ಲಿ ಕೇವಲ ಅಲ್ಪಾವಧಿಯ ಬೆಳೆ ಸಾಲಗಳೇ ರೂ. 1,35,191.05 ಕೋಟಿ ಇದೆ. ರೂ.34,000 ಕೋಟಿ ಸಾಲ ಮನ್ನಾದಿಂದ ಏನು ಮಾಡಲು ಸಾಧ್ಯ? ಇದರಿಂದ ನಿಜಕ್ಕೂ ಎಲ್ಲಾ ರೈತರಿಗೂ ಸಹಾಯವಾಗಲಿದೆಯೇ? ಎಂದು ಪ್ರಶ್ನಿಸಿದರು.
ಬಳಿಕ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷಿಸಿದ್ದಾರೆಂದು ಆರೋಪಿಸಿದ ಶೆಟ್ಟರ್, ಸರ್ಕಾರ ಉತ್ತರ ಕರ್ನಾಟಕದ ವಿರೋಧಿ ಸರ್ಕಾರವಾಗಿದೆ. ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷಿಸಿದ್ದೀರಿ. ಈ ಭಾಗವನ್ನು ನೋಡಿದರೆ ನಿಮಗೆ ಅಲರ್ಜಿ ಎಂಬಂತೆ ಆಡುತ್ತೀದ್ದೀರಿ. ದಕ್ಷಿಣ ಕರ್ನಾಟಕಕ್ಕೆ ಮಾತ್ರ ಅನುದಾನ ಹಾಗೂ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದೀರಿ. ಉತ್ತರ ಕರ್ನಾಟಕ ಭಾಗದ ಕಡತ ನಿಮ್ಮ ಟೇಬಲ್ ಮೇಲೆ ಬರುತ್ತಿದ್ದಂತೆಯೇ ಅದನ್ನು ತಿರಸ್ಕರಿಸಿದ್ದೀರಿ. ಕಾರ್ಯಗತಗೊಳ್ಳಲು ಸಿದ್ಧಗೊಂಡಿರುವ ಯೋಜನೆಗಳನ್ನು ನಿರಾಕರಿಸಿದ್ದೀರಿ ಎಂದು ಆರೋಪಿಸಿದರು. ಈ ಆರೋಪವನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಇದೇವೇಳೆ ನಿರಾಕರಿಸಿದರು.
ಆರೋಪ ಕುರಿತಂತೆ ಕಾಂಗ್ರೆಸ್ ಪಕ್ಷದ ಪ್ರಿಯಾಂಕಾ ಖರ್ಗೆ ಮತ್ತು ಭೀಮಾ ನಾಯಕ್, ಜೆಡಿಎಸ್ ಶಿವಲಿಂಗ ಗೌಡ, ಬಿಜೆಪಿಯ ಜಗದೀಶ್ ಶೆಟ್ಟರ್ ಮತ್ತು ಅರವಿಂದ ಲಿಂಬಾವಳಿ ನಡುವೆ ತೀವ್ರ ಮಾತಿನ ಚಕಮಕಿಗಳು ನಡೆದವು.
ಮಾತುಕತೆ ವೇಲೆ ಬಿಜೆಪಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಕುರಿತಂತೆ ಚರ್ಚೆ ಆರಂಭಿಸಿತು.
ಈ ವೇಳೆ ಸರ್ಕಾರವನ್ನು ಸಮರ್ಥಿಸಿಕೊಂಡ ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು, ಕೆಲಸ ಮಾಡಲು ಕುಮಾರಸ್ವಾಮಿಯವರಿಗೂ ಕೆಲ ಗಡಿಗಳಿರುತ್ತವೆ ಎಂದರು. ಇದೇ ವೇಳೆ ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷಿಸುತ್ತಿದ್ದಾರೆಂಬ ಆರೋಪವನ್ನೂ ತಿರಸ್ಕರಿಸಿದರು. ರೈತರ ಸಾಲ ಮನ್ನಾದಿಂದ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚು ಲಾಭವಾಗಲಿದೆ. ಬೆಳಗಾವಿಗೆ ರೂ.9.501 ಕೋಟಿ, ಕಲಬುರಗಿ ಭಾಗಕ್ಕೆ ರೂ.5,563 ಕೋಟಿ, ಬೆಂಗಳೂರು ರೂ.7,454 ಕೋಟಿ, ಮೈಸೂರು ರೂ. 6,760 ಕೋಟಿ ಸಾಲ ಮನ್ನಾ ಮಾಡಲಾಗುತ್ತಿದೆ. ಇದರಲ್ಲಿ ಉತ್ತರ ಕರ್ನಾಟಕ ಭಾಗಕ್ಕೇ ಹೆಚ್ಚು ಲಾಭವಾಗುತ್ತಿದೆ ಎಂದರು.